ಆಕಾರದಲ್ಲಿ ಗುಲಾಬಿ ರಂಗಿದೆ ಈ ಕಣ್ಗಳಲ್ಲಿ ಶರಾಬು ತುಂಬಿದೆ ಥಳಕು


 

ಆಕಾರದಲ್ಲಿ ಗುಲಾಬಿ ರಂಗಿದೆ ಈ ಕಣ್ಗಳಲ್ಲಿ ಶರಾಬು ತುಂಬಿದೆ 


ಥಳಕು ಬಳಕಿನ ಮೈಮಾಟವೀಗ ದಢೂತಿಯಾಗಿದೆ. ಕಣ್ಣುಗಳಲ್ಲಿ ಮಾದಕತೆ ಬದಲು ನಶೆ. ಜೀವನವೇ ಬೇಡೆಂದು ಕುಡಿತಕ್ಕೆ ದಾಸಿಯಾಗಿ, ಮಕ್ಕಳನ್ನೂ ಕಡೆಗಣಿಸಿ, ಸಾವಿಗೆ ಹಪಹಪಿಸುತ್ತಾ ಬದುಕು ಸಾಗಿಸುತ್ತಿದ್ದಳು ಒಂದು ಕಾಲದ ಪಡ್ಡೆ ಹುಡುಗರ ಕಣ್ಮಣಿ ಡಿಸ್ಕೋ ಶಾಂತಿ. ಅದಕ್ಕೆ ಕಾರಣ, ತಾನು ಪ್ರೀತಿಸಿ ಮದುವೆಯಾಗಿ, 23 ವರ್ಷ ಸುಖ ದಾಂಪತ್ಯ ನಡೆಸಿ, ಇಬ್ಬರು ಗಂಡು ಮಕ್ಕಳ ತಾಯಿಯಾಗಿ, ಅಪ್ಪಟ ಗೃಹಿಣಿಯಂತೆ ಜೀವನ ಸಾಗಿಸುತ್ತಿದ್ದ ಡಿಸ್ಕೋಶಾಂತಿ ಬದುಕಲ್ಲಿ ಬಿರುಗಾಳಿ ಎಬ್ಬಿಸಿದ್ದು ಆಕೆಯ ಗಂಡ, ತೆಲುಗಿನ ಖ್ಯಾತ ನಟ ಶ್ರೀಹರಿ ಅಕಾಲಿಕ ಸಾವು.


೮೦-೯೦ರ ದಶಕದ ಸಿನಿಪ್ರಿಯರ ಹಾಟ್ ಫೇವರಿಟ್ ಡಿಸ್ಕೋ ಶಾಂತಿ.‌ ಮಡಿವಂತರು ಮೂಗು ಮುರಿಯುತ್ತಿದ್ರೆ ಪಡ್ಡೆಗಳ ನಿದ್ದೆ ಕೆಡಿಸುವಂತಿದ್ದಳು. ಈಗಿನ ಐಟಂ ಡಾನ್ಸ್ ಅಂದಿನ ಕ್ಯಾಬರೆ. ಅದರಲ್ಲಿ ಡಿಸ್ಕೊಶಾಂತಿ ಟಾಪ್.

ಅಂಥ ಡಿಸ್ಕೋ ಶಾಂತಿಗೆ ಈಗ 60 ವರ್ಷ. ಮೊನ್ನೆ ತಮಿಳು ಯೂಟ್ಯೂಬ್‌ವೊಂದರಲ್ಲಿ ಡಿಸ್ಕೋಶಾಂತಿ ಸಂದರ್ಶನ ನೋಡಲು ಸಿಕ್ಕಿತು. ಅಂದಿನ ತನ್ನ ಮಾದಕ ಮೈಮಾಟದಿಂದ ದಕ್ಷಿಣ ಭಾರತವಷ್ಟೇ ಅಲ್ಲ ಬಾಲಿವುಡ್‌, ಒಡಿಯಾ ಸೇರಿ ೯೦೦ ಚಿತ್ರಗಳಲ್ಲಿ ಕುಣಿದು ಕುಪ್ಪಳಿಸಿದ್ದ ಡಿಸ್ಕೋ ಶಾಂತಿ ಈಗ ಹೇಗಿದ್ದಾರೆ ಗೊತ್ತಾ? ಕ್ಯಾಬರೆ ಡಾನ್ಸ್‌ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದ ಶಾಂತಕುಮಾರಿ ಅಲಿಯಾಸ್‌ ಡಿಸ್ಕೋ ಶಾಂತಿ ಬದುಕು ಮತ್ತೊಂದು ಮಗ್ಗಲಿಗೆ ಹೊರಳಿದೆ. ಅಂದಿನ ಕ್ಯಾಬರೆ ನಟಿಯರ  ಲೈಫು ಕರಾಳವಾಗಿರುತ್ತೆ. ಮದುವೆ ಇಲ್ಲದೇ ಒಂಟಿಯಾಗಿ ತೆರೆಮರೆಯಲ್ಲಿರುವ ಹಲವು ಕ್ಯಾಬರೆ ನಟಿಯರ ಮಧ್ಯೆ, ಡಿಸ್ಕೋ ಶಾಂತಿ, ಜೀವನ ಮಾತ್ರ ಸುಂದರವಾಗಿತ್ತು. ಕಾರಣ ಆಕೆಯ ಗಂಡ, ತೆಲುಗಿನ ಖ್ಯಾತ ನಟ ‍ಶ್ರೀಹರಿ. ಕ್ಯಾಬರೆ ಡ್ಯಾನ್ಸ್‌ ಮೂಲಕವೇ ಖ್ಯಾತಿಯ ತುತ್ತ ತುದಿಗೇರಿದ್ದ ಡಿಸ್ಕೋಶಾಂತಿಯನ್ನು ಪ್ರೀತಿಸಿ ಮದುವೆಯಾಗಿದ್ದರು ಶ್ರೀಹರಿ. ಡಿಸ್ಕೋಶಾಂತಿ ಬಗೆಗಿನ ಯಾವ ಪುಕಾರುಗಳಿಗೂ ತಲೆಕೆಡಿಸಿಕೊಳ್ಳದ ಶ್ರೀಹರಿ, ಆಕೆಯನ್ನು ಮಗುವಿನಂತೆ ನೋಡಿಕೊಳ್ತಿದ್ದರಂತೆ. ಶಾಂತಿಯನ್ನು ತಲ್ಲಿ ಎಂದೇ ಕರೆಯುತ್ತಿದ್ದ ಶ್ರೀಹರಿ, ಆಕೆಯ ಪಾಲಿಗೆ ಪ್ರೀತಿಪಾತ್ರ ಭಾವ.

-1996ರಲ್ಲಿ ಮದುವೆಯಾದ ಡಿಸ್ಕೋ ಶಾಂತಿ-  ಶ್ರೀಹರಿ ದಂಪತಿಗೆ ಎರಡು ಗಂಡು ಮತ್ತು ಒಬ್ಬಳು ಮಗಳು. ಆದರೆ, ಮಗಳು ಅಕ್ಷರಾ ಹುಟ್ಟಿ ನಾಲ್ಕು ತಿಂಗಳಿಗೆ ಕೊನೆಯುಸಿರೆಳೆದಳು. ಇವಳ ನೆನಪಲ್ಲಿಯೇ ಅಕ್ಷರಾ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಹಳ್ಳಿಗಳಿಗೆ ಶುದ್ಧ ನೀರು ಮತ್ತು ಶಾಲೆಗೆ ಬೇಕಾದ ಸೌಕರ್ಯ ನೀಡುವ ಸಾರ್ಥಕ ಕೆಲಸ ಮಾಡ್ತಿದ್ರು. ಆದರೆ, ಡಿಸ್ಕೋಶಾಂತಿ ಬಾಳಲ್ಲಿ ಮತ್ತೊಂದು ಬಿರುಗಾಳಿ. 2013ರಲ್ಲಿ ಶ್ರೀಹರಿ, ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದೇ, ತನ್ನ ಪ್ರೀತಿಯ ಭಾವನನ್ನು ಕಳೆದುಕೊಂಡ ಡಿಸ್ಕೋ ಶಾಂತಿ, ಮದ್ಯವ್ಯಸನಿ ಆಗಿಬಿಟ್ರು. 

  ‍ಶ್ರೀಹರಿಯೇ ತನ್ನ ಜೀವ, ಜೀವನವಾಗಿಸಿಕೊಂಡಿದ್ದ ಶಾಂತಿಗೆ, ‍ಶ್ರೀಹರಿಯ ಸಾವು ಅರಗಿಸಿಕೊಳ್ಳಲಾಗಲಿಲ್ಲ. ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಗಂಡನನ್ನು ಮರೆಯಲಾರದ ಶಾಂತಿ, ಕುಡಿತಕ್ಕೆ ಶರಣಾಗಿಬಿಟ್ಟಳು.

ಮನೆ, ಮಕ್ಕಳು ಯಾವುದರ ಬಗ್ಗೆಯೂ ಗಮನವಿಲ್ಲದೇ, ಮೂರು ಹೊತ್ತು ಕುಡಿತ, ಕುಡಿತ. ಎಚ್ಚರವಾದಾಗ ಎದ್ದು, ಭಾವನ ಫೋಟೋ ಎದುರು ಕಣ್ಣೀರು. ಒಂದಲ್ಲ, ಎರಡಲ್ಲ ಸತತ ಏಳು ವರ್ಷ, ಶಾಂತಿ ಕುಡಿತಕ್ಕೆ ದಾಸಿಯಾಗಿಬಿಟ್ಟಿದ್ದಳು. ಆಗಲೇ ಎದೆಯೆತ್ತರಕ್ಕೆ ಬೆಳೆದಿದ್ದ ಮಕ್ಕಳು, ತಾಯಿ ಕುಡಿದು ಬಿದ್ದು ಆರೋಗ್ಯ ಹದಗೆಟ್ಟಾಗಲೆಲ್ಲ, ಆಸ್ಪತ್ರೆಗೆ ಸೇರಿಸಿ ಟ್ರೀಟ್ಮೆಂಟ್‌ ಕೊಡಿಸುತ್ತಿದ್ದರಂತೆ. ದಿನೇ ದಿನೇ ಶಾಂತಿಯ ಆರೋಗ್ಯ ಹದಗೆಡುತ್ತಿದ್ದಂತೆ, ಮಕ್ಕಳು ಕಂಗಾಲಾಗಿ ಬಿಟ್ಟರು. ಒಂದು ದಿನ ಶಾಂತಿಯ ಕೈಹಿಡಿದು, ಅಪ್ಪನೂ ಇಲ್ಲ, ನೀನೂ ಹೋಗಿಬಿಟ್ಟರೆ ನಮ್ಮ ಗತಿ ಏನೆಮ್ಮ ಎಂದು ಕಣ್ಣೀರಾದರಂತೆ. ಮಕ್ಕಳ ಕಣ್ಣೀರು ಶಾಂತಿಯ‌ ಕಣ್ತೆರೆಸಿತು. 

 ಕುಡಿತ ಬಿಟ್ಟು, ಅವರ ಓದು, ಕೆಲಸದತ್ತ ಗಮನಹರಿಸಿದಳಂತೆ. ಕಳೆದ ಮೂರು ವರ್ಷದಿಂದ ಕುಡಿತ ಬಿಟ್ಟಿರುವ ಡಿಸ್ಕೋ ಶಾಂತಿ, ತನ್ನ ಜೀವವೇ ಆಗಿರುವ ಭಾವವನ್ನು ಮಾತ್ರ ಮರೆಯಲಾರದೇ ಕೊರಗುತ್ತಿದ್ದಾಳೆ. 

ಈ ಮಧ್ಯೆ, ಹೈದ್ರಾಬಾದ್ ಸಮೀಪ ಮೆಡ್ಚಲ್‌ನ ಸುತ್ತಮುತ್ತ ಅನೇಕ ಹಳ್ಳಿಗಳನ್ನು ದತ್ತು ಪಡೆದು, ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಶಾಂತಿ. ಮಕ್ಕಳಾದ ಮೇಘಶ್ಯಾಂ ಮತ್ತು ಶಶಾಂಕ್ ಅಮ್ಮನ ಬೆನ್ನಿಗೆ ನಿಂತಿದ್ದಾರೆ.

ಕ್ಯಾಬರೆ ಡಾನ್ಸರ್‌, ಅರೆಬೆತ್ತಲೆ ಕುಣಿಯುವ ಹೆಣ್ಣು ಎಂದೆಲ್ಲ ಮೂಗು ಮುರಿಯುತ್ತಿದ್ದ ಸಮಾಜ, ಕುಟುಂಬವನ್ನು ಎದುರು ಹಾಕಿಕೊಂಡು, ಡಿಸ್ಕೋ ಶಾಂತಿಯನ್ನು ಮದುವೆಯಾದ ಶ್ರೀಹರಿ, ಒಮ್ಮೆಯೂ ವಿವಾದಕ್ಕೆ ಸಿಕ್ಕವರಲ್ಲ. ಶಾಂತಿಗೂ ಗಂಡ, ಮಕ್ಕಳೇ ಪ್ರಪಂಚವಾಗಿತ್ತು. ಅಂಥ ಡಿಸ್ಕೋ ಶಾಂತಿ, ಗಂಡನ ಸಾವಿನ ಆಘಾತದಿಂದ ಹೊರಬರಲಾರದೇ ಪಟ್ಟಕಷ್ಟವನ್ನೆಲ್ಲ ಹೇಳುತ್ತಾ, ಮಾತಿಗೊಮ್ಮೆ, ಭಾವ ಭಾವ ಎಂದು ಗಂಡನ ನೆನಪಿಗೆ ಜಾರುತ್ತಾ, ಕಣ್ಣೀರಾಗುತ್ತಿದ್ದದ್ದು ನೋಡಿ, ಹೃದಯ ಭಾರವಾಯ್ತು. 


                                                    ಕೃಪೆ #ಶೋಭಾಮಳವಳ್ಳಿ 


Comments

Popular posts from this blog

ಶಂಕರ್ ನಾಗ್ ಜೀವನ ಕಥೆ ಕರುನಾಡು ಕಂಡ ಅದ್ಬುತ ಪ್ರತಿಭೆ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಗುಡ್ ನ್ಯೂಸ್ ಎಂದಿನಂತೆ ಸೇವೆ ಮುಂದುವರಿಸಲು ಕರ್ನಾಟಕ ಆದೇಶ‌